ಕೇಶವಚಂದ್ರ ಸೇನ

1838-1884. ಆಧುನಿಕ ಭಾರತದ ಸಮಾಜ ಮತ್ತು ಮತಸುಧಾರಕ. ಕಲ್ಕತ್ತೆಯ ಉಚ್ಛವರ್ಗದ ಕುಟುಂಬವೊಂದರಲ್ಲಿ ಜನಿಸಿದ. ಅಲ್ಲಿನ ಪ್ರೌಢಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮುಗಿಸಿ ಅನಂತರ ಕೆಲವು ಕಾಲ ಬಂಗಾಳ ಬ್ಯಾಂಕಿನ ನೌಕರನಾಗಿದ್ದನಾದರೂ ಸಾಹಿತ್ಯ ಮತ್ತು ಮತ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಉದ್ದೇಶಿಸಿ ಬ್ಯಾಂಕಿನ ಕೆಲಸವನ್ನು ಬಿಟ್ಟು (1857) ಬ್ರಹ್ಮಸಮಾಜದ ಕೆಲಸದಲ್ಲಿ ನಿರತನಾದ. ಸಮಾಜ ಮತ್ತು ಮತಸುಧಾರಣೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಇಂಡಿಯನ್ ಮಿರರ್ ಎಂಬ ವಾರಪತ್ರಿಕೆಯನ್ನು ಹೊರಡಿಸಿದ. ವಿಗ್ರಹಾರಾಧನೆ ಮತ್ತು ಜಾತಿಭೇದಗಳನ್ನು ತೊರೆದಿದ್ದ ಬ್ರಹ್ಮಸಮಾಜದ ತತ್ತ್ವಗಳನ್ನು ಸಮರ್ಥಿಸಲು ದಿ ಬ್ರಹ್ಮ ಸಮಾಜ್ ವಿಂಡಿಕೇಟೆಡ್ ಎಂಬ ಗ್ರಂಥವನ್ನು ಪ್ರಕಟಿಸಿದ(1863). ಸಮಾಜ ಸುಧಾರಣೆಗಾಗಿ ಸಂಗಾತ್‍ಸಭೆಯನ್ನು ಸ್ಥಾಪಿಸಿದ. 

ಕಾಲಕ್ರಮದಲ್ಲಿ ಬ್ರಹ್ಮಸಮಾಜದ ಪ್ರಧಾನ ಆಚಾರ್ಯನಾದ ದೇವೇಂದ್ರಠಾಕೂರನಿಗೂ ಕೇಶವಚಂದ್ರನಿಗೂ ಅಂತರ್ಜಾತಿಯ ವಿವಾಹ ಮತ್ತು ವಿಧವಾ ವಿವಾಹ ವಿಚಾರಗಳಲ್ಲಿ ಭಿನ್ನಭಿಪ್ರಾಯ ಹುಟ್ಟಿತಾಗಿ ಕೇಶವಚಂದ್ರ ಆದಿಬ್ರಹ್ಮಸಮಾಜವನ್ನು ಬಿಟ್ಟು ಹೆಚ್ಚು ವ್ಯಾಪಕವಾದ ಭರತವರ್ಷಿಯ ಬ್ರಹ್ಮಸಮಾಜವನ್ನು ಸ್ಥಾಪಿಸಿದ (1866). ಈ ಸಮಾಜದ ಹಿಂದಿನ ಪ್ರಾರ್ಥನೆಗಳ ಜೊತೆಗೆ ವೇದದಿಂದಲೇ, ಬೈಬಲ್, ಕುರಾನು, ಜೆಂಡ್ ಅವೆಸ್ಥಾ ಮತ್ತು ಕೂಂಗ್ ಪೂ ಷೆ-ಮೊದಲಾದ ಅಕರಗಳಿಂದ ಆಯ್ದ ಕೆಲವು ಭಾಗಗಳನ್ನು ಸೇರಿಸಲಾಗಿತ್ತು. ಜಾತಿ ಮತ್ತು ಲಿಂಗಭೇದವನ್ನು ಎಣಿಸದೆ ಎಲ್ಲರಗೂ ಈ ಸಮಾಜದ ಸದಸ್ಯರಾಗಲು ಅವಕಾಶ ನೀಡಲಾಗಿತ್ತು. ಈ ಹೊಸ ಸಮಾಜದ ಮುಖ್ಯ ತತ್ತ್ವಗಳು ಇವು; ಈ ವಿಶ್ವವೆಲ್ಲ ಈಶನ ನಿವಾಸ. ಅವನನ್ನು ಹುಡುಕುವುದೇ ತೀರ್ಥಯಾತ್ರೆ. ಅವನ ತಿಳಿವನ್ನು ಕೊಡುವುದೇ ವೇದ. ದೈವಭಕ್ತಿಯೇ ಎಲ್ಲಾ ಮತಗಳ ಮೂಲ. ಮಾನವ ಪ್ರೇಮವೇ ಸಂಸ್ಕøತಿ. ಸ್ವಾರ್ಥ ತ್ಯಾಗವೇ ಸಂನ್ಯಾಸ. ಈತ ಸ್ಥಾಪಿಸಿದ ಬ್ರಹ್ಮಸಮಾಜದ ಎಲ್ಲ ಕಾರ್ಯಗಳಿಗೂ ಕ್ರೈಸ್ತ ಮಠಗಳ ಕಾರ್ಯವಿಧಾನ ಮೇಲು ಪಂಕ್ತಿಯಾಗಿತ್ತೆನ್ನಬಹುದು. 

ಕೇಶವಚಂದ್ರ 1870ರಲ್ಲಿ ಇಂಗ್ಲೆಂಡಿಗೆ ಹೋಗಿ ಅಲ್ಲಿನ ಜನಜೀವನದ ಪರಿಚಯ ಮಾಡಿಕೊಂಡನಲ್ಲದೆ ತನ್ನ ಮತಸುಧಾರಣೆಯ ವಿಚಾರವಾಗಿ ಉಪನ್ಯಾಸ ಮಾಡಿದ. ಇಂಗ್ಲೆಂಡಿನಿಂದ ಹಿಂತಿರುಗಿದ ಮೇಲೆ ಸಮಾಜಸುಧಾರಣೆಯ ಸಂಘವೊಂದನ್ನು ಸ್ಥಾಪಿಸಿದ. ಕಡಿಮೆ ಬೆಲೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುವುದು, ಸಮಾಜದ ಉದ್ದಾರಕ್ಕಾಗಿ ದಾನವನ್ನು ಪ್ರೋತ್ಸಾಹಿಸುವುದು, ಹೆಂಗಸರ ಜೀವನವನ್ನು ಉತ್ತಮಗೊಳಿಸುವುದು, ಪಾನನಿರೋಧ ಪ್ರಚಾರ, ವಿದ್ಯಾಪ್ರಚಾರ-ಇವು ಆ ಸಂಘದ ಮುಖ್ಯ ಉದ್ದೇಶಗಳು. ಕೇಶವಚಂದ್ರನ ಪ್ರಯತ್ನದ ಪರಿಣಾಮವಾಗಿ 1872ರಲ್ಲಿ ಬ್ರಹ್ಮಸಮಾಜ ರೀತಿಯ ಮದುವೆಗೆ ಸರ್ಕಾರದ ಅಂಗೀಕಾರ ದೊರೆಯಿತು. ಸ್ತ್ರೀ ವಿದ್ಯಾಭ್ಯಾಸಕ್ಕೆ ಮುಡುಪಾದ ಒಂದು ಪಾಠಶಾಲೆಯನ್ನು ಗಂಡುಹುಡುಗರಿಗೆಂದು ಒಂದು ಕೈಗಾರಿಕಾ ಪಾಠಶಾಲೆಯನ್ನು ನಿರಾಶ್ರೀತರಿಗಾಗಿ ಒಂದು ಆಶ್ರಮವನ್ನು ಕೇಶವಚಂದ್ರ ಸ್ಥಾಪಿಸಿದ. 

1878ರ ವೇಳೆಗೆ ಕೇಶವಚಂದ್ರನ ಸಮಾಜದ ಸದಸ್ಯರಿಗೆ ತಮ್ಮ ನಾಯಕನಲ್ಲಿದ್ದ ಅಭಿಮಾನ ಕಡಿಮೆಯಾಯಿತು. ಇದಕ್ಕೆ ಮೂರು ಮುಖ್ಯ ಕಾರಣಗಳಿದ್ದುವೆನ್ನಬಹುದು; ಸಮಾಜದ ಆಡಳಿತದಲ್ಲಿ ಸದಸ್ಯರು ಭಾಗಿಗಳಾಗಲು ಅನುಕೂಲವಾಗುವಂಥ ನಿಯಮಾವಳಿಯನ್ನು ರಚಿಸುವ ಆಡಳಿತವನ್ನು ಕೇಶವಚಂದ್ರ ತಾನೇ ವೈಯಕ್ತಿಕವಾಗಿ ನಡೆಸುತ್ತಿದ್ದುದು. ಮತಸುಧಾರಣೆಯ ವಿಚಾರವಾಗಿ ತಾನು ದೇವರಿಂದ ನೇರವಾಗಿ ಆದೇಶ ಪಡೆದಿರುವುದಾಗಿ ಕೇಶವಚಂದ್ರ ಹೇಳುತ್ತಿದ್ದುದು. 1872ರ ವಿವಾಹಕಾನೂನಿಗೆ ವಿರುದ್ಧವಾಗಿ ಕೇಶವಚಂದ್ರ ಸಣ್ಣವಯಸ್ಸಿನ ತನ್ನ ಮಗಳನ್ನು ಸಣ್ಣ ವಯಸ್ಸಿನ ಕೂಚ್‍ಬಿಹಾರ್ ಮಹಾರಾಜನಿಗೆ ಕೊಟ್ಟು ಮದುವೆಮಾಡಿದ್ದು. ಈ ಕಾರಣಗಳ ಸಲುವಾಗಿ ಅನೇಕ ಸದಸ್ಯರು ಕೇಶವಚಂದ್ರ ಸಮಾಜವನ್ನು ಬಿಟ್ಟು, ಸಾಧಾರಣ ಬ್ರಹ್ಮಸಮಾಜವೆಂಬ ಹೊಸ ಸಮಾಜವನ್ನು ಸ್ಥಾಪಿಸಿದರು (1878).

ಆದರೂ ಕೇಶವಚಂದ್ರ ತನ್ನ ಸಮಾಜವನ್ನು ಮುಂದುವರಿಸಿದ. 1881ರಲ್ಲಿ ನವವಿಧಾನ್ ಎಂಬ ಹೆಸರಿನಲ್ಲಿ ಒಂದು ಹೊಸ ಸಂದೇಶವನ್ನು ಪ್ರಕಟಿಸಿದ. ತಾನು ಮತ್ತು 12 ಮಂದಿ ಪ್ರವರ್ತಕರು ಈ ಸಂದೇಶವನ್ನು ದೇವರಿಂದ ಆದೇಶವಾಗಿ ಪಡೆದಿರುವುದಾಗಿ ತಿಳಿಸಿದ. ಕ್ರೈಸ್ತ ಮತ್ತು ಹಿಂದೂ ಆಚರಣೆಗಳಿಗೆ ಗೂಢಾರ್ಥವನ್ನು ಕಲ್ಪಿಸಿ ಅವನ್ನು ಪ್ರಚಾರಕ್ಕೆ ತಂದ. ಈತನ ಮತಭಾವನೆಗಳು ಮತ್ತು ಆಚಾರಗಳು ವಿಶೇಷವಾಗಿ ಕ್ರೈಸ್ತಮತದ ಅನುಕರಣವಾಗಿದ್ದುದರಿಂದ ಭಾರತೀಯರಿಗೆ ಈತನ ಸಮಾಜದಲ್ಲಿದ್ದ ಆಸಕ್ತಿ ಕ್ರಮೇಣ ಕಡಿಮೆಯಾಯಿತು.

ಕೇಶವಚಂದ್ರ ಒಳ್ಳೆಯ ಬರಹಗಾರನಾಗಿದ್ದನೆಂಬುದಕ್ಕೆ ಈತ ಬರೆದ ಅನೇಕ ಧಾರ್ಮಿಕ ಗ್ರಂಥಗಳು ಸಾಕ್ಷಿಯಾಗಿವೆ. ಸಾಯುವ ಮುನ್ನ ಈತ ಬರೆದ ದಿ ನ್ಯೂ ಸಂಹಿತ ಆರ್  ದಿ ಸೆಕ್ರೆಡ್ ಲಾಸ್ ಆಫ್ ದಿ ಆರ್ಯನ್ಸ್ ಆಫ್ ದಿ ನ್ಯೂ ಡಿಸ್ಪೆನ್ಸೇಷನ್ ಎಂಬುದು ಉಲ್ಲೇಖಾರ್ಹವಾದ ಗ್ರಂಥ. 
(ನೋಡಿ- ಬ್ರಹ್ಮಸಮಾಜ)     						
	(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ